ಬಿಳಿಚಿಗೆ
 ನೈಸರ್ಗಿಕವಾಗಿ ವ್ಯಕ್ತಿಯ ಕಣ್ಣು, ಕೂದಲು ಹಾಗೂ ಚರ್ಮಗಳಲ್ಲಿ ಇರುವ ಹಳದಿ, ಕೆಂಪು, ಕಂದು ಅಥವಾ ಕಪ್ಪು ಬಣ್ಣಗಳಲ್ಲಿ ಯಾವುದೂ ಇಲ್ಲದೆ ಅವು ಬಿಳಿಚಿಕೊಂಡಿರುವಿಕೆ (ಆಲ್ಬಿನಿಸಮ್).  ಆಫ್ರಿಕ ಖಂಡದಲ್ಲಿ ಬೆಳ್ಳಗಿರುವ ಕೆಲವು ನೀಗ್ರೋಗಳನ್ನು ಪೋರ್ಚುಗೀಸರು ಮೊತ್ತಮೊದಲಿಗೆ ಕಂಡಾಗ ಅವರನ್ನು ಆಲ್ಬಿನೊಗಳೆಂದು ಕರೆದರು.  ಅಲ್ಲಿಂದೀಚೆಗೆ ಆಲ್ಬಿನೊ, ಆಲ್ಬಿನಿಸಮ್ ಎಂಬ ಪದಗಳ ಅರ್ಥವನ್ನು ವಿಸ್ತರಿಸಿ ಜೀವಿಗಳಿಗೆಲ್ಲ ಅನ್ವಯಿಸುವ ಸರ್ವಮಾನ್ಯ ಪದಗಳಾಗಿ ವ್ಯವಹರಿಸುವುದಿದೆ.  ಅರ್ಥಾತ್ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಪಕ್ಷಿ ಮತ್ತು ಸಸ್ಯಗಳಲ್ಲಿ ಕೂಡ ಈ ಪರಿಸ್ಥಿತಿ ಕಂಡು ಬರುವುದನ್ನು ವಿಜ್ಞಾನಿಗಳು ಗುರುತಿಸಿ ವಿವರಿಸಿದ್ದಾರೆ.  ಪಕ್ಷಿಗಳಲ್ಲಿ ಅವುಗಳ ರೆಕ್ಕೆ ಪುಕ್ಕಗಳು ಮತ್ತು ಮೀನುಗಳಲ್ಲಿ ಅವುಗಳ ಘಟಕಗಳು ತಮ್ಮ ವಿಶಿಷ್ಟ ಬಣ್ಣಗಳ ಲೋಪದಿಂದಾಗಿ ಬೆಳ್ಳಗೆ ಇರುತ್ತವೆ.  ಆದರೆ ಸಾಕಿದ ಇಲ್ಲವೆ ಬೇರೆ ವಿಧವಾದ ರಕ್ಷಿತ ಪರಿಸ್ಥಿತಿಯಲ್ಲಿರುವ ಪ್ರಾಣಿಪಕ್ಷಿಗಳಲ್ಲಿ ಮಾತ್ರ ಇಂತ ಬಿಳಿಚಿಗೆ ಕಂಡುಬರುತ್ತದೆ. ಕಾಡಿನಲ್ಲಿ ನೈಸರ್ಗಿಕವಾಗಿ ಜೀವನ ನಡೆಸುತ್ತಿರುವ ಅವೇ ಪ್ರಾಣಿ ಪಕ್ಷಿಗಳಲ್ಲಿ ಬಿಳಿಚಿಗೆ ಕಂಡುಬರುವುದು ತೀರ ಅಪರೂಪ.  ಬಿಳಿ ಕಾಗೆ, ಬಿಳಿ ಹುಲಿ, ಬಿಳಿ ಆನೆ ಮುಂತಾದ ಕೆಲವೇ ಉದಾಹರಣೆಗಳನ್ನು ಕೊಡಬಹುದು.  ಕಾರಣ ಇಷ್ಟೇ: ಪ್ರಾಣಿಪಕ್ಷಿಗಳಿಗೆ ಯಾವುದೇ ವಿಶಿಷ್ಟವಾದ ವರ್ಣಗಳು ಬಹುಶಃ ಆತ್ಮರಕ್ಷಣೆ, ಆಹಾರ ಸಂಪಾದನೆ, ಸಂತಾನೋತ್ಪತ್ತಿ ಮುಂತಾದ ಜೀವನ ಕ್ರಮಗಳಿಗೆ ಅನುಕೂಲವಾಗಿ ಪ್ರಾಪ್ತವಾಗಿರುತ್ತವೆ. ವರ್ಣಲೋಪವಾದರೆ ಇಂಥ ಸೌಲಭ್ಯಗಳೂ ಲೋಪವಾದಂತೆ. ಹೀಗಾಗಿ ವರ್ಣಲೋಪವಾಗಿ ಬಿಳಿಚಿಕೊಂಡಿರುವ ಜೀವಿಗಳು ಬದುಕಿ ಉಳಿಯುವುದು ದುಸ್ಸಾಧ್ಯವಲ್ಲದಿದ್ದರೆ ಕಡುಕಷ್ಟವಂತೂ ಹೌದು.  ಆದ್ದರಿಂದಲೇ ಕಾಡಿನ ಪ್ರಾಣಿಪಕ್ಷಿಗಳಲ್ಲಿ ಬಿಳಿಚಿಗೆ ಕಾಣಬರದು. ಆದರೆ ಬಿಳಿಚಿ ಕೊಂಡಿರುವುದೇ ರಕ್ಷಣೆ ಪೋಷಣೆಗಳಿಗೆ ಅನುಕೂಲವಾಗಬಹುದಾದ ಕಾಡು ಪ್ರಾಣಿಗಳು ತಮ್ಮ ಸ್ವಾಭಾವಿಕ ವರ್ಣ ಕಳೆದುಕೊಂಡು ಬಿಳಿಚಿಕೊಳ್ಳುವುದು ಉಂಟು.  ಉದಾಹರಣೆಗೆ ಶೀತವಲಯದ ಚಳಿಗಾಲದಲ್ಲಿ ಸರ್ವತ್ರ ಹಿಮಾಚ್ಛಾದನೆಯಿಂದ ಬೆಳ್ಳಗೇ ಇರುವ ಪರಿಸರದಲ್ಲಿ ನರಿ ಮುಂತಾದ ಪ್ರಾಣಿಗಳು ಬಿಳಿಚಿಕೊಂಡು ತಮ್ಮ ಸುಳಿವನ್ನು ಮರೆಸಿ ಜೀವನ ಸಾಗಿಸುತ್ತವೆ.  ಸ್ವಾಭಾವಿಕ ಪರಿಸ್ಥಿತಿಯಲ್ಲಿ ವಿಶಿಷ್ಟ ಬಣ್ಣದ ಮೀನು, ಮೊಲ, ಇಲಿ ಇತ್ಯಾದಿಗಳ ವರ್ಣ ಅವುಗಳ ನೈಸರ್ಗಿಕ ಪರಿಸರದಲ್ಲಿ ಅಗತ್ಯವಾಗಿರುವಂತೆ ಅವನ್ನು ಸಾಕಾಣಿಕೆ ಕೇಂದ್ರದಲ್ಲಿ ಇಟ್ಟು ಬೆಳೆಸುವಾಗ ಅಗತ್ಯವಿರುವುದಿಲ್ಲ.  ಆದ್ದರಿಂದ ಇಂಥ ಸಂದರ್ಭದಲ್ಲಿ ಅವುಗಳಲ್ಲಿ ಬಿಳಿಚಿಗೆ ಕಂಡುಬರುವುದುಂಟು.  

ಮನುಷ್ಯರ ಕೂದಲು, ಕಣ್ಣು, ಚರ್ಮ ಇವುಗಳ ಬಣ್ಣ ಆ ಅಂಗಗಳ ಕೋಶಗಳಲ್ಲಿ ಇರುವ ಕಂದುಬಣ್ಣದ ಮೆಲನಿನ್ ಎಂಬ ರಾಸಾಯನಿಕ ಪರಿಮಾಣವನ್ನು ಅವಲಂಬಿಸಿದೆ.  ಮೆಲನಿನ್ ಎಲ್ಲ ಪ್ರಾಣಿಗಳಲ್ಲೂ ಕಂಡುಬರುತ್ತದೆ.  ಸ್ತನಿ ಹಾಗೂ ಪಕ್ಷಿಗಳ ಚರ್ಮದ ಬಣ್ಣಕ್ಕೆ ಅದೇ ಕಾರಣ.  ಮೆಲನಿನ್ ಹೆಚ್ಚಾಗಿ ಇಲ್ಲವೆ ಕಡಿಮೆ ಆಗಿ ಕೋಶಗಳಲ್ಲಿ ಶೇಖರಣೆ ಆಗಿರುವುದರಿಂದ ಚರ್ಮ ಕಪ್ಪಾಗಿ, ಎಣ್ಣೆಗೆಂಪಾಗಿ ಇಲ್ಲವೆ ಕಂದು ಬಣ್ಣದ್ದಾಗಿ ಕಂಡುಬರುತ್ತದೆ.  ಮೆಲನಿನ್ ಪೂರ್ಣವಾಗಿ ಲೋಪವಾಗಿದ್ದರೆ ತೀರ ಬೆಳ್ಳಗೆ ಇರುತ್ತದೆ.  ಕೂದಲೂ ಕಣ್ಣುಗಳೂ ಅಷ್ಟೆ.  ಮೆಲನಿನ್ ಬಲು ಕಡಿಮೆ ಪರಿಮಾಣದಲ್ಲಿ ಇರುವುದರಿಂದಲೂ ಚರ್ಮದ ತಳದಲ್ಲಿರುವ ರಕ್ತನಾಳ ಎದ್ದುಕಾಣುವುದರಿಂದಲೂ ಪಾಶ್ಚಾತ್ಯರ ಮುಖ ಮೈಗಳು ಕೆಂಪು ಬಣ್ಣ ತಳೆದಿರುತ್ತವೆ.  ಅಲ್ಲದೆ ಕಣ್ಣುಗಳು ನೀಲಿ ಇಲ್ಲವೆ ಹಸುರು ಬಣ್ಣದ್ದಾಗಿ ಇರುತ್ತವೆ.  ಬೆಕ್ಕಿನ ಕಣ್ಣಿನ ಹಾಗೆ ಇರುವುದೂ ಸಾಮಾನ್ಯ.  ಮೆಲನಿನ್ ತೀರ ಕಡಿಮೆ ಇರುವುದರಿಂದಲೇ ಚೀನಾ ಹಾಗೂ ಮಂಗೋಲಿಯಾದ ಜನ ತುಸು ಹಳದಿ ಬಣ್ಣದವರಾಗಿ ಕಾಣಿಸುವುದು. ಸಾಮಾನ್ಯವಾಗಿ ಪ್ರೋಟೀನುಗಳಲ್ಲಿ ಒಂದು ಘಟಕವಾಗಿ ಇರುವ ಟೈರೊಸಿನ್ ಎಂಬ ವರ್ಣರಹಿತ ಆಮೈನೊ ಆಮ್ಲದಿಂದ ಕೆಲವು ವಿಶಿಷ್ಟ ಕೋಶಗಳಲ್ಲಿ ಮೆಲನಿನ್ ಸಂಯೋಜಿತವಾಗುತ್ತದೆ.  ಇಂಥ ಮೆಲನಿನ್ ಉತ್ಪಾದಕ ಕೋಶಗಳು ಭ್ರೂಣವಸ್ಥೆಯಲ್ಲಿ ನಿರ್ದಿಷ್ಟಗೊಂಡು ಚರ್ಮ ಕಣ್ಣುಗಳಿಗೆ ವಲಸೆ ಹೋಗುತ್ತವೆ.  ಅಲ್ಲಿ ನೆಲಸಿದ ಮೇಲೆ ಅವುಗಳಲ್ಲಿ ವಿಶಿಷ್ಟ ಕಿಣ್ವಗಳ ಕ್ರಿಯೆಯಿಂದ ಮೆಲನಿನ್ ಸಂಯೋಗವಾಗುತ್ತದೆ.  ಈ ವಿವಿಧ ಘಟ್ಟಗಳಲ್ಲಿ ಯಾವುದು ತಪ್ಪಿದ್ದರೂ ಮೆಲನಿನ್ ಸಂಯೋಗವಾಗದೆ ಬಿಳಿಚಿಗೆ ಕಂಡುಬರಬಹುದು.  ಟೈರೊಸಿನ್ನನ್ನು ಮೊದಲು ಟೈರೊಸಿನೇಸ್ ಎಂಬ ಕಿಣ್ವ ಡೋಪ ಎಂಬುದಾಗಿ (ಡೈಹೈಡ್ರಾಕ್ಸಿಫಿನೈಲ್ ಅಲನಿನ್) ಪರಿವರ್ತಿಸುತ್ತದೆ.  ಡೋಪದಿಂದ ಕೊನೆಯದಾಗಿ ಮೆಲನಿನ್ ಸಂಯೋಗವಾಗುವುದಕ್ಕೂ ವಿಶಿಷ್ಟ ಕಿಣ್ವಗಳು ಅಗತ್ಯ.  ಈ ಕಿಣ್ವಗಳ ಮುಖ್ಯವಾಗಿ ಟೈರೊಸಿನೇಸಿನ ಅಭಾವದಿಂದ ಇಂಥ ಪರಿವರ್ತನೆಗಳು ನಡೆಯದೆ ಮೆಲನಿನ್ ಉತ್ಪಾದನೆ ಖೋತವಾಗಬಹುದು.  

ಟೈರೊಸಿನೇಸಿನ ಕ್ರಿಯೆಯನ್ನು ನಿರ್ಬಂಧಿಸುವ ನೈಸರ್ಗಿಕ ಪ್ರಕ್ರಿಯೆಯೂ ಇದೆ ಎಂದು ತೋರುತ್ತದೆ.  ಬಹುಶಃ ಅತಿನೇರಳೆ ಕಿರಣಗಳು ಮತ್ತು ಪರಿಸರದ ಸ್ವಾಭಾವಿಕ ಶೈತ್ಯ (ಕೋಲ್ಡ್) ಕಡಿಮೆ ಆಗುವುದು ಇಂಥ ಪ್ರಕ್ರಿಯೆಯನ್ನು ತಡೆಗಟ್ಟಿ ಟೈರೊಸಿನೇಸಿನ ಚಟುವಟಿಕೆಯನ್ನು ಹೆಚ್ಚಿಸಿ ಹೆಚ್ಚು ಮೆಲನಿನ್ ಉತ್ಪಾದನೆಗೊಳ್ಳುವಂತೆ ಮಾಡುತ್ತದೆ.  ದಿನಗಟ್ಟಲೆ ಬಿಸಿಲಿಗೆ ಮೈ ಒಡ್ಡಿದಾಗ ಚರ್ಮದ ಬಣ್ಣ ಹೆಚ್ಚು ಕಪ್ಪಾಗುವುದು ಇದೇ ಕಾರಣದಿಂದ ಇರಬಹುದು. ಟೈರೊಸಿನೇಸಿನ ಚಟುವಟಿಕೆಯನ್ನು ತಗ್ಗಿಸುವ ಮತ್ತು ಹೆಚ್ಚಿಸುವ ಇಂಥ ನೈಸರ್ಗಿಕ ಪ್ರಕ್ರಿಯೆಗಳ ಪರಸ್ಪರ ಪೈಪೋಟಿಯಿಂದ ಚರ್ಮದ ಬಣ್ಣ ತಿಳಿಯಾಗಿ ಬಿಳಿಚಿ ದಂತಾಗುವುದೂ ಇಲ್ಲವೆ ಢಾಕಾಗುವುದೂ ಮೇಲೆ ಹೇಳಿದ ಶೀತವಲಯ ಪ್ರಾಣಿಗಳ ನೈಸರ್ಗಿಕ ವರ್ಣ ಹಾಗೂ ಬಿಳಿಚಿಗೆಯ ಪರ್ಯಾಯತೆಗೆ ಕಾರಣವಾಗಿರಬಹುದು.  

ಮೆಲನಿನ್ ಕೊರತೆಯಿಂದ ಮಾನವರಲ್ಲಿ ಉದ್ಭವಿಸುವ ಬಿಳಿಚಿಗೆ ಮೂರು ರೀತಿಯದ್ದಾಗಿದೆ. ಚರ್ಮ, ಕಣ್ಣು, ಕೂದಲು ಮೂರೂ ಬಿಳಿಚಿಕೊಂಡಿರುವ ಸರ್ವತ್ರ ಬಿಳಿಚಿಗೆ, ಕಣ್ಣು ಮಾತ್ರ ಮೆಲನಿನ್ ರಹಿತವಾಗಿರುವುದು, ಚರ್ಮದಲ್ಲಿ ಅಲ್ಲಲ್ಲಿ ಬಿಳಿಮಚ್ಚೆಗಳಂತೆ ವರ್ಣರಹಿತ ಕ್ಷೇತ್ರಗಳಿರುವುದು ಇಂಥ ಬಿಳಿ ಮಚ್ಚೆಗಳಿರುವ ಪರಿಸ್ಥಿತಿಯೇ ಅತ್ಯಂತ ಸಾಮಾನ್ಯವಾದ ಬಿಳಿಚಿಗೆ. ಮಚ್ಚೆಗಳು ಸಾಧಾರಣವಾಗಿ ರುಂಡ ಮುಂಡಗಳ ನಡುವಿನ ಗೆರೆಯಲ್ಲಿ ಇರುವುದುಂಟು. ಭ್ರೂಣಾವಸ್ಥೆಯಲ್ಲಿ ಬೇರ್ಪಟ್ಟ ಮೆಲನಿನ್ ಉತ್ಪಾದಕ ಕೋಶಗಳು ಚರ್ಮದಲ್ಲಿ ತಮ್ಮ ನೆಲೆಗೆ ವಲಸೆ ಹೋಗುವುದರಲ್ಲಿ ಅವ್ಯವಸ್ಥೆ ಉಂಟಾಗಿ ಈ ಪರಿಸ್ಥಿತಿ ಉದ್ಭವಿಸುತ್ತದೆ.  ಕಣ್ಣಿಗೆ ಮಾತ್ರ ಸೀಮಿತವಾದ ಬಿಳಿಚಿಗೆ ಬಲು ಅಪರೂಪ.  ಈ ಪರಿಸ್ಥಿತಿಯಲ್ಲೂ ಅನೇಕ ವೇಳೆ ಸರ್ವತ್ರ ಬಿಳಿಚಿಗರ ಕಣ್ಣಲ್ಲೂ ಮೆಲನಿನ್ನಿನ ಪೂರ್ಣಾಭಾವದಿಂದ ಕಣ್ಣುಗಳು ತಿಳಿಕೆನ್ನೀಲಿ (ಪಿಂಕ್) ಬಣ್ಣದವಾಗಿರುತ್ತವೆ.  ಪಾಪೆಗಳು ಕೆಂಪಗೆ ಇರುತ್ತವೆ.  ಆದರೆ ಸಾಮಾನ್ಯವಾಗಿ ಸರ್ವತ್ರ ಬಿಳಿಚಿಗರಲ್ಲಿ ಚರ್ಮ ಪೂರ್ತಿ ಬಿಳಿಚಿಕೊಂಡಿರುತ್ತದೆಯೇ ಹೊರತು ಕೂದಲಾಗಲಿ ಕಣ್ಣಾಗಲಿ ಹೀಗೆ ವರ್ಣ ಹೀನವಾಗಿರುವುದಿಲ್ಲ.  ಕೂದಲು ಮಾಸಲು ಬಿಳಿಯಾಗಿರಬಹುದು.  ಹೀಗೆ ಇದ್ದರು ಅಥವಾ ಪೂರ್ಣ ಬೆಳ್ಳಗೇ ಇದ್ದರೂ ವ್ಯಕ್ತಿಗೆ ವಯಸ್ಸಾದಂತೆ ಕೂದಲು ಹಳದಿ ಬಣ್ಣಕ್ಕೆ ತಿರುಗುತ್ತದೆ.  ಕಣ್ಣು ಕೆನ್ನೇಲಿ ಯಾಗಿರದೆ ತಿಳಿನೀಲಿಯಾಗಿರಬಹುದರು.  ಹೇಗೆಯೇ ಇದ್ದರೂ ಇಂಥ ವ್ಯಕ್ತಿಗೆ ಬಿಸಿಲಿನಲ್ಲಿ ಕಣ್ಣು ಬಿಡಲು ಸಾಧ್ಯವಾಗದು.  ಹೆಚ್ಚು ಬೆಳಕಿನಲ್ಲಿ ಕೂಡ ದೃಷ್ಟಿಮಂದವಾಗಿಯೇ ಇರುತ್ತದೆ.  

ಈ ಮೂರು ರೀತಿಯ ಬಿಳಿಚಿಗೆಗಳೂ ಆನುವಂಶಿಕ ಗುಣಗಳು.  ಆದರೆ ಈ ಗುಣಗಳಲ್ಲಿ ವ್ಯತ್ಯಾಸ ಉಂಟು.  ಮಚ್ಚೆಗಳಂಥ ಬಿಳಿಚಿಗೆಗೆ ಕಾರಣಭೂತವಾದ ಜೀನ್ ಪ್ರಧಾನ ರೀತಿಯದು (ಡಾಮಿನೆಂಟ್). ಅಂದರೆ ತಂದೆಗೋ ತಾಯಿಗೋ ಇಂಥ ಬಿಳಿಚಿಗೆ ಇದ್ದರೆ ಅವರ ಮಕ್ಕಳುಗಳ ಪೈಕಿ ಅರ್ಧಜನರಲ್ಲಿ ಇಂಥ ಬಿಳಿಚಿಗೆ ಕಂಡುಬಂದೇ ತೀರುತ್ತದೆ.  ಆಶ್ಚರ್ಯಕರ ಸಂಗತಿಯೆಂದರೆ ಇಂಥ ಬಿಳಿಮಚ್ಚೆಗಳು ತಂದೆ ಮಕ್ಕಳಲ್ಲಿ ಅಥವಾ ತಾಯಿಮಕ್ಕಳಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದ ದೇಹದ ಅನನ್ಯಸ್ಥಳಗಳಲ್ಲಿ (ಐಡೆಂಟಿಕಲ್ ಪ್ಲೇಸಸ್) ಕಂಡುಬರುವುದು.  ಇಂಥ ಬಿಳಿಚಿಗೆಯನ್ನು ತೊನ್ನಿನಿಂದ (ಲ್ಯೂಕೊಡರ್ಮ್) ಬೇರೆಯಾಗಿ ಗುರುತಿಸಬೇಕು.  ಆನುವಂಶಿಕವಾಗಿದ್ದು ತಂದೆ ಅಥವಾ ತಾಯಿಯಲ್ಲಿಯಂತೆಯೇ ಬಿಳಿಚಿರುವ ಸ್ಥಳಗಳು ಕಾಣಬರುವುದರರಿಂದ ಹೀಗೆ ಪ್ರತ್ಯೇಕಿಸುವುದು ಸುಲಭ. 

ಕಣ್ಣಿಗೆ ಮಾತ್ರ ಸೀಮಿತವಾದ ಬಿಳಿಚಿಗೆಯ ಜೀನ್ ಲೈಂಗಿಕ ವರ್ಣತಂತುವಿನಲ್ಲಿ (ಸೆಕ್ಸ್ ಕ್ರೋಮೊಸೋಮ್) ಗುಪ್ತರೀತಿಯದಾಗಿ (ರಿಸೆಸಿವ್) ಇರುತ್ತದೆ; ವರ್ಣಾಂಧತೆಯ ಜೀನಿನಂತೆಯೇ. ಆದ್ದರಿಂದ ಸಾಮಾನ್ಯವಾಗಿ ಗಂಡು ಸಂತÀತಿಯಲ್ಲಿ ಮಾತ್ರ ಇಂಥ ಬಿಳಿಚಿಗೆ ಕಂಡುಬರುತ್ತದೆ.  ಸರ್ವತ್ರ ಬಿಳಿಚಿಗೆ ಕಾರಣ ಒಂದು ಗುಪ್ತ ಜೀನೇ.  ಆದ್ದರಿಂದ ತಾಯಿಯೋ ತಂದೆಯೋ ಒಬ್ಬರು ಸರ್ವತ್ರ ಬಿಳಿಚಿಗರಾಗಿದ್ದರೆ ಅವರ ಮಕ್ಕಳಲ್ಲಿ ನಾಲ್ವರಲ್ಲಿ ಒಬ್ಬರಿಗೆ ಬಿಳಿಚಿಗೆ ಇಳಿದುಬರುತ್ತದೆ; ಒಬ್ಬರು ಬಿಳಿಚಿಗೆಯಿಂದ ಪೂರ್ಣ ಮುಕ್ತರಾಗಿರುತ್ತಾರೆ, ಇನ್ನಿಬ್ಬರು ಸ್ವತಃ ಬಿಳಿಚಿಗರಾಗಿರದಿದ್ದರೂ ತಮ್ಮ ಸಂತಾನಕ್ಕೆ ಬಿಳಿಚಿಗೆಯನ್ನು ವರ್ಗಾಯಿಸುವಂಥವರಾಗಿರುತ್ತಾರೆ.  ಆನುವಂಶಿಕವೇ ಆಗಿರುವುದರಿಂದ ಬಿಳಿಚಿಗೆಗೆ ಚಿಕಿತ್ಸೆ ತಿಳಿಯದು.  
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ